ನಾನೇ ಅಭ್ಯರ್ಥಿ ಆತಂಕ ಬೇಡ: ಗೌರಿಶಂಕರ್

ಕಾರ್ಯಕರ್ತರಿಗೆ ಅಭಯ ನೀಡಿದ ಶಾಸಕ

ತುಮಕೂರು: ಹೈ ಕೋರ್ಟ್ ತೀರ್ಪಿನಲ್ಲಿ ಗೌರಿಶಂಕರ್ ನಕಲಿ ಬಾಂಡ್ ಹಂಚಿದ್ದ ಎನ್ನುವುದು ಎಲ್ಲಿಯೂ ಇಲ್ಲ, ಚುನಾವಣೆಗೆ ನಿಲ್ಲಬಾರದು ಎಂದು ಹೇಳಿಲ್ಲ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕೆಲ ಮುಖಂಡರು ಗೌರಿಶಂಕರ್ ಸ್ಪರ್ಧೆಯ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ, ಕಾರ್ಯಕರ್ತರು ಯಾವುದೇ ಗೊಂದಲ, ಭಯಪಡುವ ಅವಶ್ಯಕತೆ ಇಲ್ಲ ನಾನೇ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಹೇಳಿದರು.

ಚುನಾವಣೆ ಹೇಗೆ ನಡೆಯುತ್ತದೆ ಎಂದು ಜನರಿಗೂ ಗೊತ್ತು ನ್ಯಾಯಾಲಯಕ್ಕೂ ಗೊತ್ತು, ಸಮಾವೇಶ ಮಾಡಿ ಸೀರೆ, ಮಾಂಸದೂಟ ಹಾಕಿದ್ದು ಧರ್ಮನಾ? ನಕಲಿ ಅಂಕಪಟ್ಟಿ ಕೊಟ್ಟಿದ್ಸು ಧರ್ಮನಾ? ಜನತಾ ನ್ಯಾಯಾಲಯದಲ್ಲಿ ಸೋಲುವ ಭಯದಿಂದ ನನ್ನ ಮೇಲೆ ಷಡ್ಯಂತ್ರ ಮಾಡಲಾಗಿದೆ, ರಾಹುಲ್ ಗಾಂಧಿಯನ್ನೇ ಬಿಡಲಿಲ್ಲ ನನ್ನನ್ನು ಬಿಡುತ್ತಾರೆಯೆ? ಸೋಲಿಸಲು ಆಗದ ನಾಯಕನನ್ನು ಷಡ್ಯಂತ್ರ ಮಾಡಿ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.

ನ್ಯಾಯಾಲಯದಲ್ಲಿ ಹೇಳಿರುವ ಅರೇಹಳ್ಳಿ ಮಂಜುನಾಥ್ ಎಂಬುವನು ಯಾರು ಎನ್ನುವುದೇ ನನಗೆ ಗೊತ್ತಿಲ್ಲ, ಆತನ ಮುಖವನ್ನೇ ನೋಡಿಲ್ಲ, ಅವರೇ ಅಕ್ರಮ ಮಾಡಿ, ಅವರೇ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ, ಹೈ ಕೋರ್ಟ್ ತೀರ್ಪಿನ ಮೇಲೆ ಸುಪ್ರೀಂ ಕೋರ್ಟ್ ಗೆ ಅರ್ಜಿಸಲ್ಲಿಸಲಿದ್ದು ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೌರಿಶಂಕರ್ ನಕಲಿ ಬಾಂಡ್ ಹಂಚಿದ್ದು ಕಂಡು ಬಂದಿಲ್ಲ ಎಂದು ಹೈ ಕೋರ್ಟ್ ಹೇಳಿದೆ ಆದರೂ ಸುಮ್ಮನೆ ಅಪಪ್ರಚಾರವನ್ನು ಮಾಡಲಾಗುತ್ತಿದೆ,10 ವರ್ಷ ಅಧಿಕಾರದಲ್ಲಿ ನೀವು ಏನು ಮಾಡಿಲ್ಲವೇ? ನೀವೇ ಅಧಿಕಾರದಲ್ಲಿ ಇರಬೇಕಾ? ಬೇರೆಯವರು ಅಧಿಕಾರಕ್ಕೆ ಬಂದರೆ ದಬ್ಬಾಳಿಕೆ, ದೌರ್ಜನ್ಯ, ಗೂಂಡಾಗಿರಿ, ಬೇಕಾದ ಪೊಲೀಸರನ್ನು ಹಾಕಿಸಿಕೊಂಡು  ಜೆಡಿಎಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ಕ್ಷೇತ್ರದಲ್ಲಿ  ಸಾರ್ವಜನಿಕರ ಕೆಲಸ ಮಾಡಲು ಅವಕಾಶ ನೀಡಲಿಲ್ಲ, ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಹಾಕಿದರು, ಕ್ಷೇತ್ರಕ್ಕೆ  4 ಕೋಟಿ ಅನುದಾನ ತಂದು ಗುಬ್ಬಿಯಲ್ಲಿ ಕೆಲಸ ಮಾಡಿಸಿದರು, ಇದು ಮಾಜಿ ಶಾಸಕರಿಗೆ ಕ್ಷೇತ್ರದ ಬಗ್ಗೆ ಇರುವ ಕಾಳಜಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೈಕೋರ್ಟ್ ತೀರ್ಪು ಬರುವ ಮುಂಚೆಯೇ ಫಲಿತಾಂಶ ಹೀಗೆ ಬರಲಿದೆ ಎಂದು ಸ್ನೇಹಿತರೊಬ್ಬರು ಫೋನ್ ಮಾಡಿದ್ದರು, ಮಾಜಿ ಶಾಸಕರು ಯಾರ ಮೇಲೆ ಪ್ರಭಾವ ಬೀರಿದ್ದಾರೆ ಯಾರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಎಲ್ಲ ಗೊತ್ತಿದೆ, ನೂರಾರು ಪ್ರಕರಣಗಳು ಮಾಜಿ ಶಾಸಕರ ಮೇಲಿದ್ದರೂ ಸಹ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ, ಬಗರ್ ಹುಕುಂ ಅಕ್ರಮ, ಲೋಕಾಯುಕ್ತ ಪ್ರಕರಣವೂ ಶೀಘ್ರ ಈಚೆಗೆ ಬರಲಿದೆ ಎಂದರು.

ಕಾರ್ಯಕರ್ತರು ಯಾವುದೇ ಆತಂಕಕ್ಕೆ ಒಳಗಾಗುವವ ಅವಶ್ಯಕತೆ ಇಲ್ಲ ನಾನೇ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ, ಜನತಾ ನ್ಯಾಯಾಲಯದಲ್ಲಿ ಗೌರಿಶಂಕರ್ ಗೆಲ್ಲುತ್ತಾನೆ ಎಂದು ವಾಮಮಾರ್ಗ ಅನುಸರಿಸಿದ್ದಾರೆ, ಚುನಾವಣಾ ಅಕ್ರಮ ಮಾಡುವಾಗ ಚುನಾವಣಾಧಿಕಾರಿಗೆ ಯಾಕೆ  ದೂರು ಕೊಡಲಿಲ್ಲ ಎಂದು ಪ್ರಶ್ನಿಸಿದ ಅವರು, ಸೋಲುವ ಭೀತಿ ಎದುರಿಸುತ್ತಿರುವುದಕ್ಕೆ ಇಂತಹ ಮಾರ್ಗಗಳನ್ನು ಹಿಡಿಯುತ್ತಾರೆ ಎಂದರು

ಪತ್ರಿಕಾಗೋಷ್ಠಿಯಲ್ಲ ಹಾಲನೂರು ಅನಂತ್, ಬೆಳಗುಂಬ ವೆಂಕಟೇಶ್, ನರುಗನಹಳ್ಳಿ ಮಂಜುನಾಥ್, ಹಿರೇಹಳ್ಳಿ ಮಹೇಶ್, ಹೆತ್ತೇನಹಳ್ಳಿ ಮಂಜುನಾಥ್, ಟಿ.ಆರ್.ನಾಗರಾಜು, ದೀಪು, ವಿಷ್ಣುವರ್ಧನ್, ಸೇರಿದಂತೆ ಇತರರಿದ್ದರು.

Verified by MonsterInsights