ತುಮಕೂರು: ಕುರುಬ ಸಮುದಾಯಕ್ಕೆ ಮೂರು ಪಕ್ಷಗಳಲ್ಲಿ ಅವಕಾಶ ನೀಡಬೇಕು, ತುಮಕೂರು ನಗರದಿಂದ ಮಾಜಿ ಎಂಎಲ್ ಸಿ ಡಾ.ಹುಲಿನಾಯ್ಕರ್ ಅವರಿಗೆ ಟಿಕೆಟ್ ನೀಡಬೇಕೆಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 4.5 ಲಕ್ಷ ಮತದಾರರಿದ್ದು, ಬರೀ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ, ಸಿರಾ, ಚಿನಾಹಳ್ಳಿ, ತುಮಕೂರು, ತಿಪಟೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯ ಮತದಾರರು ಹೆಚ್ಚಿದ್ದು, ಸಮುದಾಯವನ್ನು ನಿರ್ಲಕ್ಷಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತುಮಕೂರು ನಗರದಲ್ಲಿ ಬಿಜೆಪಿಯಿಂದ ಡಾ.ಹುಲಿನಾಯ್ಕರ್, ಸಿರಾದಲ್ಲಿ ಬಿ.ಕೆ.ಮಂಜುನಾಥ್, ಚಿ.ನಾ.ಹಳ್ಳಿಯಲ್ಲಿ ವೈ.ಸಿ.ಸಿದ್ದರಾಮಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಪಕ್ಷಾತೀತವಾಗಿ ಆಗ್ರಹಿಸುವ ಮೂಲಕ ಟಿಕೆಟ್ ನೀಡದಿದ್ದರೆ ತಕ್ಕ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.
ಪುಟ್ಟರಾಜು ಮಾತನಾಡಿ ಎಂಎಲ್ ಸಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿರುವ ಡಾ.ಹುಲಿನಾಯ್ಕರ್ ಅವರಿಗೆ ಬಿಜೆಪಿ ಟಿಕೆಟ್ ನೀಡದರೆ ಹನ್ನೊಂದು ಕ್ಷೇತ್ರಗಳಲ್ಲಿಯೂ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಿಮ್ಮರಾಜು, ಸುರೇಶ್, ಮಂಜುನಾಥ್, ರಮೇಶ್, ಮಲ್ಲಿಕಾರ್ಜುನ್, ಮಹೇಶ್ ಸೇರಿದಂತೆ ಇತರರಿದ್ದರು.