ಸಾಫ್ಟ್ ರಾಜಕಾರಣಿ ಹಣೆಪಟ್ಟಿ ಕಳಚಿದ ಡಾ.ಜಿ.ಪರಮೇಶ್ವರ್

ತುಮಕೂರು: ವೈಟ್ ಕಾಲರ್ ರಾಜಕಾರಣಿ, ಜನರಿಗೆ ಸಿಗದ ಶಾಸಕ ಎಂಬೆಲ್ಲ ಆಪಾದನೆಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಡಾ.ಜಿ.ಪರಮೇಶ್ವರ್ ದೂರವಾಗಿಸಿದ್ದಾರೆ, ಜನರೊಂದಿಗೆ ಬೆರೆಯುತ್ತಲೇ ತಮ್ಮ ಸಾಫ್ಟ್ ರಾಜಕಾರಣಿ ಎನ್ನುವುದನ್ನು ಕಳಚಿಕೊಳ್ಳುವ ಮೂಲಕ ರಾಜಕಾರಣದ ಎಲ್ಲ ಪಟ್ಟುಗಳಿಗೂ ನಾನು ಸಿದ್ಧ ಎಂಬುದನ್ನು ವಿರೋಧಿಗಳಿಗೆ ತಲುಪಿಸಿದ್ದಾರೆ ಎನ್ನುವ ವಿಶ್ಲೇಷಣೆ ಪ್ರಾರಂಭವಾಗಿದೆ.

ಹತ್ತು ವರ್ಷಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲು ರಾತ್ರಿ ಶ್ರಮಿಸಿದ್ದ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಗಾದಿ ಇನ್ನೊಂದೇ ಮೆಟ್ಟಿಲು ಇದ್ದಾಗಲೇ ಸ್ವಪಕ್ಷೀಯರಿಂದಲೇ ಕಾಲೆಳೆಸಿಕೊಂಡಿದ್ದು ಸುಳ್ಳಲ್ಲ, ಅದೊಂದು ಸೋಲು ರಾಜಕಾರಣದಲ್ಲಿ ಪಳಗಿದ್ದ ಡಾ.ಜಿ.ಪರಮೇಶ್ವರ್ ಅವರನ್ನು ರಾಜಕಾರಣದ ಮತ್ತೊಂದು ಮಜಲಿಗೆ ಪರಿಚಯಿತು.

ವೈಟ್ ಕಾಲರ್ ರಾಜಕಾರಣಿ ಎಂಬ ಅಪವಾದದಿಂದಲೇ 2013ರ ವಿಧಾನಸಭಾ ಚುನಾವಣೆಯಲ್ಲಿ ಸೋತು, ಮುಖ್ಯಮಂತ್ರಿ ಗಾದಿಯನ್ನು ಕಳೆದುಕೊಂಡಿದ್ದು ಇತಿಹಾಸವಾಗಿದೆ, ಕುತಂತ್ರದ ರಾಜಕಾರಣಕ್ಕೆ ದೂರವಾಗಿಯೇ ಸಜ್ಜನ ರಾಜಕಾರಣದ ಮೂಲಕ ಇಡೀ ರಾಜ್ಯದಲ್ಲಿ ಹೆಸರು ಮಾಡಿದ್ದ ಡಾ.ಜಿ.ಪರಮೇಶ್ವರ್ ಕುತಂತ್ರಗಳಿಗೆ ತಕ್ಕ ತಿರುಗೇಟು ನೀಡಲು ಸಿದ್ಧರಾಗಿದ್ದಾರೆ.

ಸೋಮವಾರ ಕೊರಟಗೆರೆಯಲ್ಲಿ ನಡೆದ ಒಕ್ಕಲಿಗ ಸಮಾವೇಶದಲ್ಲಿ ಬನ್ರೋ ಯಾವನ್ ಬರ್ತೀರಾ ನೋಡೊಣ ಎನ್ನುವ ಮೂಲಕ ಬಹಿರಂಗವಾಗಿ ಸವಾಲು ಹಾಕಿದ್ದಾರೆ, ಸೋತಲ್ಲೇ ಗೆಲ್ಲಬೇಕು ಎನ್ನುವ ಹಠಕ್ಕೆ ಬಿದ್ದಿರುವ ಡಾ.ಜಿ.ಪರಮೇಶ್ವರ್ 2018ರಲ್ಲಿ ಗೆದ್ದ ನಂತರ ಕ್ಷೇತ್ರವನ್ನು ತೊರೆದಿಲ್ಲ, ಪ್ರತಿ ಹಳ್ಳಿಗೂ ಸರ್ಕಾರದ ಯೋಜನೆಯನ್ನು ತಲುಪಿಸುವ ಮೂಲಕ ಸಾಧನೆ ನೋಡಿ, ಮತ ನೀಡಿ ಎಂದು ಪ್ರಚಾರಕ್ಕೆ ಇಳಿದಿದ್ದಾರೆ.

ಬದಲಾದ ರಾಜಕಾರಣದ ಶೈಲಿ

ಡಾ.ಜಿ.ಪರಮೇಶ್ವರ್ ರಾಜಕೀಯ ಶೈಲಿ ಬದಲಾಗಿದೆ, ರಾಜಕಾರಣದಲ್ಲಿ ಅನುಸರಿಸುತ್ತಿರುವ ನಡೆಯೂ ಭಿನ್ನವಾಗಿದೆ ಅದಕ್ಕಾಗಿಯೇ ಕೊರಟಗೆರೆಯ ಕಾಂಗ್ರೆಸ್ ಮುಖಂಡರು ಪರಂ ಬದಲಾಗಿದ್ದಾರೆ ಎನ್ನುತ್ತಿದ್ದಾರೆ. ಕ್ಷೇತ್ರದಲ್ಲಿ ಓಡಾಡುತ್ತಲೇ ರಾಜಕೀಯ ಬೆಳವಣಿಗೆ ಮೇಲೆ ಕಣ್ಣಿಟ್ಟು ಕಾಯುತ್ತಿದ್ದಾರೆ, 2013ರ ಕುತಂತ್ರಗಾರಿಕೆ ಮಾಡಲು ಮುಂದಾದರೆ ಅವರು ಏನು ಮಾಡುತ್ತಾರೋ ಅದನ್ನೇ ಮಾಡುತ್ತೇನೆ ಎಂದು ಹೇಳಿಕೊಳ್ಳುವ ಮೂಲಕ ಎದುರಾಳಿಗಳಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಿದ್ದಾರೆ.

ದೂರವಾಗಿದ್ದ ಆಪ್ತರನ್ನು ಕೂಡಿಕೊಳ್ಳುವ ಮೂಲಕ ರಾಜಕೀಯ ವಿರೋಧಿಗಳಿಗೆ ಭಿನ್ನಮತಕ್ಕೆ ಅವಕಾಶಕ್ಕೆವಿಲ್ಲದಂತೆ ಮಾಡಿದ್ದಾರೆ, ಮೀಸೆಗೀಸೆಗೆಲ್ಲ ಹೆದರಲ್ಲ, ಜೆಡಿಎಸ್ ಕುರುಹು ಇಲ್ಲ ಕ್ಷೇತ್ರದಲ್ಲಿ ಇರುವುದು ಕಾಂಗ್ರೆಸ್ ಮಾತ್ರ ಎನ್ನುವ ಸಂದೇಶವನ್ನು ರವಾನಿಸಿರುವ ಡಾ.ಜಿ.ಪರಮೇಶ್ವರ್ ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಪ್ರತಿ ಬೂತ್ ಮಟ್ಟದಲ್ಲಿ ಪ್ರತ್ಯೇಕ ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡು ಕ್ಷೇತ್ರದಲ್ಲಿ ಓಡಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಪರಂ ರಣತಂತ್ರದ ಕರುಹು ಸಿಗದೇ ಎದುರಾಳಿಗಳನ್ನು ವಿಚಲಿತರಾಗುವಂತೆ ಮಾಡಿರುವ ಪರಂ ಬದಲಾಗಿದ್ದಾರೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

Verified by MonsterInsights