ತುಮಕೂರು:ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ ಜೀವಿತಾವಧಿ ಶಿಕ್ಷೆ ವಿಧಿಸಿ ತುಮಕೂರಿನ ವಿಶೇಷ ಮಕ್ಕಳ ಸ್ನೇಹಿ ನ್ಯಾಯಾಲಯ ಆದೇಶಿಸಿದೆ.
ಸಿರಾ ತಾಲೂಕಿನ ಕಸಬಾ ಹೋಬಳಿ, ಮುದಿಗೆರೆ ಗ್ರಾಮದಲ್ಲಿ 22/10/2022ರಂದು ರಾತ್ರಿ 10 ಗಂಟೆಗೆ ತಂದೆ ಬಸವರಾಜು ಮಲಗಿದ್ದ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಎಬ್ಬಿಸಿ ಬೆದರಿಸಿ ಅತ್ಯಾಚಾರ ನಡೆಸಿದ್ದ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಸಾಯಿಸಿ ಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದ.
ತಂದೆಯ ದುಷ್ಕೃತ್ಯವನ್ನು ಬಾಲಕಿ ತನ್ನ ಚಿಕ್ಕಮ್ಮನಿಗೆ ತಿಳಿಸಿದ್ದು, ಈ ವೇಳೆ ಆಕೆಯ ಚಿಕ್ಕಮ್ಮ ಜಾಗೃತಗೊಂಡು, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಶಿರಾದಲ್ಲಿ ಸಹಾಯಕ ಮಕ್ಕಳ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ವೇಳೆ ಅಧಿಕಾರಿಗಳ ತಕ್ಷಣವೇ ತಂದೆ ಬಸವರಾಜು ವಿರುದ್ಧ ದೂರು ನೀಡಿದ್ದಾರೆ. ಅಂತೆಯೇ ಆರೋಪಿಯ ವಿರುದ್ಧ ಕಲಂ 04, ಪೋಕ್ಸೋ ಐಪಿಸಿ 504, 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣ ಸಂಬಂಧ ತನಿಖೆ ನಡೆಸಿದ ಶಿರಾ ಪೊಲೀಸ್ ಇನ್ಸ್ ಪೆಕ್ಟರ್ ಪಿ.ಬಿ. ಹನುಮಂತಪ್ಪ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದರು.
ಈ ಪ್ರಕರಣದ ವಿಚಾರಣೆ ನಡೆಸಿದ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ(ಪೋಕ್ಸೋ) ಅಭಿಯೋಜನೆಯ ಪರ ವಿಚಾರಣೆ ಮಾಡಲಾದ ಸಾಕ್ಷಿ ವಿಚಾರಣೆಯಿಂದ ಹಾಜರು ಪಡಿಸಿದ ದಾಖಲೆಗಳಿಂದ ಆರೋಪಿತನ ವಿರುದ್ಧ ಕಲಂ 506 ಐಪಿಸಿ ಹಾಗೂ ಪೋಕ್ಸೋ ಆಕ್ಟ್ 2012ರ ಅಡಿಯಲ್ಲಿ ಅಪರಾಧವು ರುಜುವಾತುಗೊಂಡಿರುತ್ತದೆ ಎಂದು ತೀರ್ಮಾನಿಸಿ ಘನ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಸಂಧ್ಯಾ ರಾವ್ ಪಿ. ಅವರು ಆರೋಪಿ ಬಸವ ರಾಜುಗೆ ಜೀವಿತಾವಧಿ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿದ್ದು, ನೊಂದ ಬಾಲಕಿಗೆ 10 ಲಕ್ಷ ಪರಿಹಾರ ಘೋಷಿಸಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾದ ಆಶಾ ಕೆ.ಎಸ್. ಅವರು ವಾದ ಮಂಡಿಸಿದರು.