ಪಾವಗಡ : ತಾಲೂಕನ್ನು ಅಭಿವೃದ್ಧಿಪಡಿಸುವಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಕೊಡುಗೆ ಶೂನ್ಯ ವೆಂದು, ರಾಯಪ್ಪ (ತಿಮ್ಮ ರಾಯಪ್ಪ)ಮತ್ತು ರಮಣಪ್ಪ( ವೆಂಕಟರಮಣಪ್ಪ) ನನ್ನು ಶೀಘ್ರವೇ ಮನೆಗಳಿಗೆ ಕಳುಹಿಸಿಕೊಡಲಾಗುವುದೆಂದು ಮಾಜಿ ಸಚಿವ ಮತ್ತು ಕೆಆರ್ ಪಿಪಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಗುಡುಗಿದರು.
ಪಟ್ಟಣದ ಗುರುಭವನ ಮೈದಾನದಲ್ಲಿ ಭಾನುವಾರ ನಡೆದ ಬಹಿರಂಗ ಸಭೆ ಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದಗಳಿಂದಾಗಿ, ತಾಲೂಕು ಅಭಿವೃದ್ಧಿಯಾಗಿಲ್ಲ ಎಂದರು.
ತಾಲೂಕಿನಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸಿದ್ದು, ಜನರು ಬದಲಾವಣೆ ಬಯಸುತ್ತಿದ್ದಾರೆ , ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಪಾವಗಡ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ನೇರಳೇಕುಂಟೆ ನಾಗೇಂದ್ರ ಕುಮಾರ್ ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು.
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ರೈತನಿಗೆ ಪ್ರತಿ ವರ್ಷ 15, 000ರೂ ಗಳನ್ನು ನೇರವಾಗಿ ರೈತನ ಖಾತೆಗೆ ಹಣ ಹಾಕುವ ಮೂಲಕ ಪ್ರತಿ ಗ್ರಾಮಗಳಲ್ಲಿ ರೈತ ಭರವಸೆ ಕೇಂದ್ರಗಳನ್ನು, ಸ್ಥಾಪನೆ ಮಾಡಿ ರೈತರಿಗೆ ಅಗತ್ಯವಾದ ಉತ್ತಮ ಬೀಜ, ರಸಗೊಬ್ಬರಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ತಾಲೂಕಿನಾದ್ಯಂತ 50 ಸಾವಿರಕ್ಕೂ ಹೆಚ್ಚಿನ ಯುವಕರು ಜೀವನ ನಿರ್ವಹಣೆಗಾಗಿ ವಲಸೆ ಹೋಗಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದಾಗಲಿ, ಅಥವಾ ತನ್ನ ಸ್ನೇಹಿತರಿಂದ ಆಗಲಿ, ತಾಲೂಕಿನಲ್ಲಿ ವಿವಿಧ ಬಗೆಯ ಕಾರ್ಖಾನೆಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು.
ನೇರಳೆಕುಂಟೆ ನಾಗೇಂದ್ರ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿಯ ಬದಲು, ದ್ವೇಷದ ರಾಜಕಾರಣ ನಡೆಯುತ್ತಿದೆ, ಒಬ್ಬ ಶಿಕ್ಷಕನಾಗಿ , ಸ್ಥಳೀಯ ವ್ಯಕ್ತಿಯಾಗಿ ತಾಲೂಕಿನಾದ್ಯಂತ ಇರುವ ಸಮಸ್ಯೆಗಳ ಬಗ್ಗೆ ತನಗೆ ಅರಿವಿದೆ, ಪಾವಗಡದ ಬದಲಾವಣೆ ಗಾಗಿ ತನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಭೆಗೆ ಬಂದಿರುವವರು ಸಂತೆಗೆ ಬಂದ ಜನ ಅಲ್ಲ, ಸ್ವಾಭಿಮಾನದಿಂದ ಬಂದ ಜನ, ಸಭೆಯನ್ನು ವಿಫಲ ಮಾಡುವುದಕ್ಕೆ ಎಲ್ಲಿಲ್ಲದ ಹುನ್ನಾರ ನಡೆದಿದೆ, ಹಾಲಿ ಮತ್ತು ಮಾಜಿ ಶಾಸಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಬಳ್ಳಾರಿಯ ಹಿರಿಯ ಮುಖಂಡ ಖುದ್ದು ಸಾಬ್, ಹನುಮಂತರಾಯಪ್ಪ, ಶಿವಪ್ಪ ,ಧನಂಜಯ್, ಶಂಕರ್ ರೆಡ್ಡಿ ಅಶ್ವತ್ ರೆಡ್ಡಿ ಕಿರಣ್ ಕುಮಾರ್, ವಂಶಿ, ಹಾಗೂ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.