ತುಮಕೂರು: ಇತಿಹಾಸ ಪ್ರಸಿದ್ಧ ದೇವರಾಯನದುರ್ಗದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವವು ಫೆಬ್ರವರಿ 28 ರಿಂದ ಮಾರ್ಚ್ 12ರವರೆಗೆ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಿದ್ಧತೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇವರಾಯನದುರ್ಗ ದೇವಾಲಯಕ್ಕೆ ಹೋಗುವ ರಸ್ತೆ ದುರಸ್ತಿ, ಡಾಂಬರೀಕರಣ ಕಾಮಗಾರಿ, ಬೀದಿ ದೀಪ ದುರಸ್ತಿ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಾತ್ರೆಗೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಜಾತ್ರೆಯ ಸಮಯದಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶಿಸಿದರು.ಅಂತೆಯೇ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಭಕ್ತಾದಿಗಳಿಗೆ ದೇವರಾಯನದುರ್ಗಕ್ಕೆ ಹೋಗಿ ಬರಲು ಅನುವಾಗುವಂತೆ ಕೆ.ಎಸ್.ಆರ್.ಟಿ.ಸಿ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಬೇಕಲ್ಲದೆ ದೇವಾಲಯದಿಂದ ಕುಂಭಿ ಬೆಟ್ಟಕ್ಕೆ ಮಿನಿ ಬಸ್‌ಗಳನ್ನು ನಿಯೋಜಿಸಬೇಕು ಎಂದು ನಿರ್ದೇಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾರ್ಚ್ 7ರಂದು ಜರುಗಲಿರುವ ಬ್ರಹ್ಮ ರಥೋತ್ಸವ ದಿನದಂದು ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಸೂಚಿಸಿದರು. ಕುಂಭಿ ಬೆಟ್ಟದ ಬಳಿ ಜಾತ್ರಾ ಸಮಯದಲ್ಲಿ ವಾಹನ ಸಂಚಾರ ಹಾಗೂ ಭಕ್ತಾದಿಗಳಿಗೆ ತೊಂದರೆಯಾಗದತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಾತ್ರಾ ಸಮಯದಲ್ಲಿ ದೇವಾಲಯದ ಸುತ್ತಮುತ್ತಲಿನ 5 ಕಿ.ಮೀ. ದೂರದವರೆಗೂ ಮದ್ಯಪಾನ ಮಾರಾಟ ನಿಷೇಧಿಸಲು ಕ್ರಮವಹಿಸಬೇಕೆಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ಕಾನೂನು ಸುವ್ಯವಸ್ಥೆ ಮತ್ತು ಅಪಘಾತಗಳನ್ನು ತಡೆಯುವ ಉದ್ದೇಶದಿಂದ ತಹಶಿಲ್ದಾರ್, ಇಒ, ಪೊಲೀಸ್ ಇಲಾಖೆಯ ಅನುಮತಿಯಿಲ್ಲದೆ ರಸ್ತೆ ಬದಿಗಳಲ್ಲಿ ಯಾವುದೇ ರೀತಿಯ ಫ್ಲೆಕ್ಸ್, ಬಂಟಿಂಗ್ಸ್ ಗಳನ್ನುಅಳವಡಿಸಬಾರದು ಈ ಕುರಿತು ಅರೇಗುಜ್ಜನಹಳ್ಳಿ, ಊರ್ಡಿಗೆರೆ ಹಾಗೂ ಬೆಳಗುಂಬ ಪಂಚಾಯಿತಿ ಪಿಡಿಒಗಳು ನಿಗಾವಹಿಸಬೇಕು ಎಂದು ತಿಳಿಸಿದರಲ್ಲದೇ ಜಾತ್ರಾ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಹೆಚ್. ಶಿವಪ್ಪ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಸ್.ಟಿ. ಸುನೀಲ್‌ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.