ಶಾಸಕ ಗೌರಿಶಂಕರ್ ಅನರ್ಹತೆ ಪ್ರಕರಣದ ತೀರ್ಪಿಗೆ ಕೌಂಟ್ ಡೌನ್

ಗಿರೀಶ್
1 Min Read

ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ನಕಲಿ ಬಾಂಡ್ ಹಂಚುವ ಮೂಲಕ ಚುನಾವಣಾ ಅಕ್ರಮ ಆರೋಪದಲ್ಲಿ ಭಾಗಿಯಾಗಿರುವ ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆಯನ್ನು  ಅಸಿಂಧುಗೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಬಿಜೆಪಿಯ ಪರಾಜಿತ ಅಭ್ಯರ್ಥಿ ಬಿ ಸುರೇಶ್ ಗೌಡ ಸಲ್ಲಿಸಿರುವ ಚುನಾವಣಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿ ತೀರ್ಪು ಕಾಯ್ದಿರಿಸಿದೆ.

ಅರ್ಜಿದಾರ ಪರ ವಕೀಲರು ಪ್ರಕರಣವನ್ನು ವಿನಾ ಕಾರಣ ವಿಳಂಬ ಮಾಡಲಾಗುತ್ತಿದೆ.  ವಿಭಿನ್ನವಾದ ಲಿಖಿತ ವಾದವನ್ನು ಸಲ್ಲಿಸುವ ಮೂಲಕ ನ್ಯಾಯಾಲಯದ ಹೊರೆ ಹೆಚ್ಚಿಸಿದ್ದಾರೆ. ಹೀಗಾಗಿ, ಅರ್ಜಿಯನ್ನು ತುರ್ತಾಗಿ ಇತ್ಯರ್ಥಪಡಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಶಾಸಕ ಗೌರಿ ಶಂಕರ್ ಕುಟುಂಬದ ಸದಸ್ಯರು, ಪಕ್ಷದ ಕಾರ್ಯಕರ್ತರು ಸೇರಿಕೊಂಡು ಒಟ್ಟಾಗಿ ಚುನಾವಣಾ ಅಕ್ರಮ ನಡೆಸಿದ್ದಾರೆ. ಇಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದನ್ನು ಪರಿಶೀಲಿಸಿದ ಪೀಠವು ಪ್ರತಿ ಬಾರಿಯೂ ವಿಚಾರಣೆ ಮುಂದೂಡಿಕೆ ಕೋರಲಾಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಲಾಗದು. ಇಂದೇ ವಾದ ಮಂಡಿಸುವಂತೆ ನ್ಯಾಯಾಲಯವು ಪ್ರತಿವಾದಿಗಳ ಪರ ವಕೀಲರಿಗೆ ಸೂಚಿಸಿತು.

ಪ್ರತಿವಾದಿಗಳ ಪರವಾದ ಮಂಡಿಸಿದ ವಕೀಲರು, ಹಾಲಿ ಪ್ರಕರಣದಲ್ಲಿ ಶಾಸಕ ಗೌರಿಶಂಕರ್ ಅವರ ಕುಟುಂಬ ಸದಸ್ಯರು ಭಾಗಿಯಾಗಿಲ್ಲ. ಅರ್ಜಿದಾರರು ಹೇಳುತ್ತಿರುವಂತೆ ಇತರ ಪ್ರತಿವಾದಿಗಳು ನಮ್ಮ ಪಕ್ಷದ ಕಾರ್ಯಕರ್ತರು ಆಗಿಲ್ಲ. ನಮ್ಮ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ನಂತರ ಹೈಕೋರ್ಟ್​ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಕಾಯ್ದಿರಿಸಿತು.

ಪ್ರಕರಣದ ಹಿನ್ನೆಲೆ ಏನು?: ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌರಿಶಂಕರ್ ವ್ಯಾಪಕ ಚುನಾವಣಾ ಅಕ್ರಮ ಎಸಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಮತದಾರರಿಗೆ ಮತಯಾಚನೆ ಪತ್ರದ ಜೊತೆ ಗುಂಪು ಆರೋಗ್ಯ ವಿಮಾ ಪಾಲಿಸಿಯ ಆಮಿಷವೊಡ್ಡಿ ಅವರಿಂದ ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರ ಸುರೇಶ್ ಗೌಡ ಕೋರಿದ್ದಾರೆ.

Share this Article
Verified by MonsterInsights