ಹಂಪಿ ಕನ್ನಡ ವಿ.ವಿ.ಸಮೀಪದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನವಕ್ಕೆ ಬಿಹಾರದಿಂದ ವಿಶೇಷ ಅತಿಥಿ ಆಗಮನವಾಗಿದೆ. ಡಾರ್ವಿನ್ ವಿಕಾಸವಾದಕ್ಕೆ ಕಣ್ಣೆದುರಿನ ಸಾಕ್ಷ್ಯವಾಗಿ ಪ್ರವಾಸಿಗರೆದುರು ಈ ಅತಿಥಿ ಗೋಚರಿಸಲಿದ್ದಾನೆ. ಅಷ್ಟುಕ್ಕೂ ಈ ಅತಿಥಿ ಯಾರೆಂದು ಉಹಿಸುತ್ತಿದ್ದೀರಾ ? ಇದೇ ಆಫ್ರಿಕಾ ಮೂಲದ ಜಿರಾಫೆ.
ಮೃಗಾಲಯದ ಡಿ.ಸಿ.ಎಫ್ ಕಿರಣ್ ಕುಮಾರ್ ಅವರು ಬಿಹಾರ ಪಟ್ನಾ ಮೃಗಾಲಯದಿಂದ ಜಿರಾಫೆಯನ್ನು ತರುವಲ್ಲಿ ಆರು ತಿಂಗಳಿಂದ ಪ್ರಯತ್ನ ಪಟ್ಟಿದ್ದಾರೆ. ಇಲ್ಲಿನ ಮೃಗಾಲಯದಲ್ಲಿ ಜಿರಾಫೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಾಲ್ಕು ದಿನಗಳ ರಸ್ತೆ ಪ್ರಯಾಣದ ಮೂಲಕ ಬಿಹಾರದಿಂದ ಜಿರಾಫೆ ಕರೆ ತರಲಾಗಿದೆ. 4 ವರ್ಷದ ಈ ಜಿರಾಫೆಗೆ ಮೈಸೂರು ಮೃಗಾಲಯದಿಂದ ಆಗಮಿಸುವ ಮತ್ತೊಂದು ಜಿರಾಫೆ ಜೋಡಿಯಾಗಲಿದೆ ಎಂದು ಮಾಹಿತಿ ನೀಡಿದರು.
2017 ರಲ್ಲಿ ಪ್ರಾರಂಭಿಸಲಾದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಸ್ಥಳವಾಗಿದೆ.
ಈಗಾಗಲೇ ಉದ್ಯಾನವನದಲ್ಲಿ ಹುಲಿ, ಸಿಂಹ, ಸ್ಪಾಟರ್ ಜಿಂಕೆ, ಸಾಂಬಾರ್, ಬಾರ್ಕಿಂಗ್ ಜಿಂಕೆ ಮತ್ತು ಇತರ ಪ್ರಾಣಿಗಳಿವೆ. ಮೊಸಳೆಗಳು, ಕತ್ತೆಕಿರುಬ, ಚಿರತೆ, ಕರಡಿ, ಆಮೆ, ನರಿl ಮತ್ತು ಲಂಗೂರ್ ಸೇರಿದಂತೆ 80ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳು ಹಲವಾರು ಪ್ರಾಣಿಗಳಿವೆ. ಇವುಗಳ ಗುಂಪಿಗೆ ಹೊಸದಾಗಿ ಜಿರಾಫೆ ಕೂಡ ಸೇರ್ಪಡೆಯಾಗಿದೆ. ಹೊಸ ಅತಿಥಿಯ ಆಗಮನದಿಂದ ಮೃಗಾಲಯದ ಖ್ಯಾತಿ ಹೆಚ್ಚಲಿದೆ.
‘ಮೃಗಾಲಯದ ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಮೈಸೂರು ಮೃಗಾಲಯ ನೀಡಿದ ಜೀಬ್ರಾ, ಕಾಡೆಮ್ಮೆ ಮತ್ತಿತರ ಪ್ರಾಣಿಗಳ ಬದಲಾಗಿ ನಾಲ್ಕು ವರ್ಷದ ಹೆಣ್ಣು ಜಿರಾಫೆಯನ್ನು ಪಟ್ನಾ ಮೃಗಾಲಯದಿಂದ ಹಂಪಿ ಮೃಗಾಲಯಕ್ಕೆ ನೀಡಲಾಗಿದೆ. ಇದನ್ನು ತರಲು ಇಲ್ಲಿಂದ ವಿಶೇಷ ಬೋನು, ವಾಹನಗಳಲ್ಲಿ ಹೋಗಿ, ಸತತ ಒಂದು ವಾರ ಕಾಲ ನಿಧಾನವಾಗಿ ಪ್ರಯಾಣಿಸಿ ಇಂದು ಕಮಲಾಪುರದ ಮೃಗಾಲಯಕ್ಕೆ ಬರಲಾಗಿದೆ. ಈ ಜಿರಾಫೆಗಾಗಿ ಈಗಾಗಲೇ ವಿಶೇಷವಾದ ಆವರಣವನ್ನು ಸಿದ್ಧಪಡಿಸಲಾಗಿದ್ದು, ಇದಕ್ಕೆ ಬೇಕಾದ ಆಹಾರ ಹಾಗೂ ಆರೈಕೆಯ ವ್ಯವಸ್ತೆ ಮಾಡಲಾಗಿದೆ, ಸುದೀರ್ಘ ಪ್ರಯಾಣದಿಂದ ಚೇತರಿಸಿಕೊಂಡ ಜಿರಾಫೆ ಲವ ಲವಿಕೆಯಿಂದ ಓಡಾಡುತ್ತಿದೆ’ ಎಂದು ಹಂಪಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್.ಕಿರಣ್ ಮಾಹಿತಿ ನೀಡಿದ್ದಾರೆ.
ಜಿರಾಫೆ ತರುವಲ್ಲಿ ಕಾರ್ಯನಿರ್ವಹಿಸಿ ಪಶುವೈದ್ಯಾಧಿಕಾರಿ ಸೇರಿದಂತೆ ಇತರೆ ಸಿಬ್ಬಂದಿಗಳನ್ನು ಸಚಿವ ಆನಂದ್ ಸಿಂಗ್ ಅಭಿನಂದಿಸಿದ್ದಾರೆ.