ಕನ್ನಡ ನಾಡಿನ ಗತವೈಭವ ಬಿಂಬಿಸುವ ಹಂಪಿ ಉತ್ಸವ : ಸಿಎಂ ಬಸವರಾಜ ಬೊಮ್ಮಾಯಿ

ಗಿರೀಶ್
2 Min Read

ವಿಜಯನಗರ ಸಾಮ್ರಾಜ್ಯದ ಗತ ವೈಭವ ಬಿಂಬಿಸುವ ಸಂಭ್ರಮದ ಹಂಪಿ ಉತ್ಸವಕ್ಕೆ ಶುಕ್ರವಾರ ಸಂಜೆ ಚಾಲನೆ ದೊರೆತಿದೆ.
ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹಂಪಿಯ ಗಾಯತ್ರಿಪೀಠದ ವೇದಿಕೆಯಲ್ಲಿ ವೈಭವದ ಹಂಪಿ ಉತ್ಸವಕ್ಕೆ ಸಂಜೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಅವರು ಹಂಪಿ ಉತ್ಸವವು ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ. ಕನ್ನಡ ನಾಡನ್ನಾಳಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಮತ್ತು ಇಡೀ ಭಾರತದ ಚರಿತ್ರೆಯಲ್ಲಿಯೇ ಪ್ರಮುಖ‌‌ ಬದಲಾವಣೆ ತಂದಿರುವುದು ವಿಜಯನಗರ ಸಾಮ್ರಾಜ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಗತವೈಭವ ಬಿಂಬಿಸುವ ಸಡಗರ,ಸಂಭ್ರಮದ ಉತ್ಸವ ಹಂಪಿ ಉತ್ಸವವಾಗಿದೆ.ಎಂ.ಪಿ.ಪ್ರಕಾಶ್ ಅವರ ಕಾಲದಲ್ಲಿ ಹಂಪಿ ಉತ್ಸವ ಆರಂಭವಾಯಿತು. ಪ್ರಥಮ ಹಂಪಿ ಉತ್ಸವದಲ್ಲಿ ಪಾಲ್ಗೊಂಡ ನೆನಪನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡ ಸಿಎಂ ಬೊಮ್ಮಾಯಿ ಅವರು ವಿಜೃಂಭಣೆಯಿಂದ ವೈಭವದ ಹಂಪಿ ಉತ್ಸವ ಆಚರಣೆಗೆ ಸಚಿವರಾದ ಆನಂದಸಿಂಗ್,ಶ್ರೀರಾಮುಲು ಕಾರಣೀಕರ್ತರು ಎಂದರು.

ವಿಜಯನಗರ ಸಾಮ್ರಾಜ್ಯದ ಪುಣ್ಯಭೂಮಿ ಈ ಪ್ರದೇಶವಾಗಿದೆ.ಇಲ್ಲಿನ ಒಂದೊಂದು ಶಿಲೆಗಳು ಒಂದೊಂದು ರೋಮಾಂಚನಕಾರಿ ಕಥೆಗಳನ್ನು ಹೇಳುತ್ತವೆ;ಈ ಮೂಲಕ ಇತಿಹಾಸ ಗತವೈಭವ ಸಾರುತ್ತಿವೆ ಎಂದರು.

ಕೋವಿಡ್ ನಂತರ ಹಾಗೂ ಜಿಲ್ಲೆ ರಚನೆಯಾದ ನಂತರ ನಡೆಯುತ್ತಿರುವ ಹಂಪಿ ಉತ್ಸವ ಯಶಸ್ವಿಯಾಗಿ ನಡೆಯಲಿ ಮತ್ತು ಕಲೆ,ಸಂಸ್ಕ್ರತಿ, ಪರಂಪರೆ,ಇತಿಹಾಸ ಬಿಂಬಿಸಲಿ ಎಂದರು.
*ಹಂಪಿ ಪ್ರವಾಸಿಗರಿಗೆ ಸಕಲಸೌಕರ್ಯಕ್ಕೆ ಕ್ರಮ*: ವಿಜಯನಗರ ಸಾಮ್ರಾಜ್ಯದ ಹಂಪಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸಕಲ ಸೌಕರ್ಯಗಳನ್ನು ನಮ್ಮ ಸರಕಾರ ಕಲ್ಪಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಹಂಪಿಯಲ್ಲಿ ಇನ್ನಷ್ಟು ಅಭಿವೃದ್ದಿ ಪಡಿಸುವುದರ ಮೂಲಕ ಯಾತ್ರಿಕರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು.
ಪ್ರವಾಸಿಗರ ಅನುಕೂಲಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಂಪಿ ಸರ್ಕಿಟ್ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮೈಸೂರನ್ನು ಸರ್ಕಿಟ್ ಆಗಿ ಶೀಘ್ರ ಮಾಡಲಾಗುವುದು ಎಂದರು.

ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ 120ಕೋಟಿ ರೂ.ಗಳನ್ನು ನಮ್ಮ ಸರಕಾರ ನೀಡಿದ್ದು,ಇನ್ನೂ ಎರಡು ವಾರದೊಳಗೆ ಅಡಿಗಲ್ಲು ನೆರವೇರಿಸುವುದರ ಮೂಲಕ ಭಕ್ತರಿಗೆ ರೋಪ್ ವೇ,ರಸ್ತೆ ನಿರ್ಮಾಣ ಸೇರಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಈ ಸಮಯದಲ್ಲಿ  ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು, ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ‌ಕಲ್ಯಾಣ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಪರಣ್ಣ ಮನವಳ್ಳಿ, ಹುಡಾ ಅಧ್ಯಕ್ಷ ಅಶೋಕ್‌ ಜೀರೆ, ಹೊಸಪೇಟೆ ‌ನಗರಸಭೆ ಅಧ್ಯಕ್ಷೆ ಸುಂಕಮ್ಮ, ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಲಸಿ‌ ಮದ್ದಿನೇನಿ, ಐಜಿಪಿ ಬಿ.ಎಸ್.ಲೋಕೇಶಕುಮಾರ್, ಕನ್ನಡ ವಿವಿ ಕುಲಪತಿ ರಮೇಶ, ಜಿಪಂ ಸಿಇಒ ಬೋಯರ್ ಹರ್ಷಲ್ ನಾರಾಯಣರಾವ್, ಎಸ್ಪಿ ಶ್ರೀಹರಿಬಾಬು ಭಾಗವಹಿಸಿದರು.

Share this Article
Verified by MonsterInsights