ಬಿಜೆಪಿ ಸರ್ಕಾರದ ಪಾಪದ ಪುರಾಣ ತಿಳಿಸಲು ಪ್ರಜಾಧ್ವನಿ ಯಾತ್ರೆ: ಡಿಕೆಶಿ

ಹಾವೇರಿ: ಬಿಜೆಪಿ ಸರ್ಕಾರದ ಪಾಪದ ಪುರಾಣವನ್ನು ಜನರ ಮುಂದಿಟ್ಟು ಜನ ಸಾಮಾನ್ಯರ ಧ್ವನಿ, ಭಾವನೆ , ಜನರ ಸಮಸ್ಯೆ, ನೋವು ಎಲ್ಲದರ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಅಲೆಯಿದೆ. ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಕಳಕ ಬಂದಿದೆ. ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.‌ ವಿಧಾನಸೌಧದ ಕೋಣೆ ಗೋಡೆಗಳು ಲಂಚ ಬೇಕು ಎಂದು ಮಾತಾಡುತ್ತಿವೆ. ರಾಜ್ಯದಲ್ಲಿ ಲಂಚವಿಲ್ಲದೆ ಯಾವ ಕೆಲಸಗಳು ಆಗುವುದಿಲ್ಲ ಎಂದರು

ಅಷ್ಟರ ಮಟ್ಟಿಗೆ ಲಂಚ ಕಬಳಿಕೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ತೊಡಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರೈತರ ಬದುಕು ಹಸನಾಗಲಿಲ್ಲ, ಉದ್ಯೋಗ ಅವಕಾಶ ಕಲ್ಪಿಸಲಿಲ್ಲ. ಐಎಎಸ್ ಅಧಿಕಾರಿಗಳೆಲ್ಲ ಜೈಲು ಸೇರುವಂತಹ ಇತಿಹಾಸ ಸೃಷ್ಟಿಸಿದ್ದಾರೆ.‌ ಯಾವುದೇ ವಿಚಾರದಲ್ಲಿ ಧ್ವನಿ ಎತ್ತಿದರೆ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಎಂದರು.

ಕೋವಿಡ್ ಸಂದರ್ಭದಲ್ಲಿ ಜನ ಪ್ರಾಣ ಕಳೆದುಕೊಂಡರು. ರೈತರ ಆದಾಯ ಡಬಲ್ ಮಾಡಲಿಲ್ಲ. ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ನಿರುದ್ಯೋಗ ತಾಂಡವ ಆಡುತ್ತಿದೆ. ಹೀಗಿರುವಾಗ ಜನ‌ ನಿಮಗೆ ಓಟ್ ಕೊಡಬೇಕಾ? ಎಂದು ಬಿಜೆಪಿ ವಿರುದ್ದ ಡಿಕೆಶಿ ನೇರವಾಗಿ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಬಿಎಸ್. ಯಡಿಯೂರಪ್ಪ,‌ ಜಗದೀಶ್ ಶೆಟ್ಟರ್, ಸದಾನಂದಗೌಡ ಸೇರಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಭಾಗದಲ್ಲಿ ಯಾವ ಕೈಗಾರಿಕೆ ಸ್ಥಾಪನೆ ಮಾಡಿ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀರಿ. ನಿಮ್ಮ ಜಿಲ್ಲೆಗಳಿಗೆ ಎಷ್ಟು ಅನುದಾನ ತರುವ ಮೂಲಕ ಯಾವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಿರಿ ಎಂಬ ಪಟ್ಟಿಯನ್ನು ಮೊದಲು ಪಟ್ಟಿ ಬಿಡುಗಡೆ ಮಾಡಿ ಎಂದರು..

ಬಸವಣ್ಣನ ಆಣೆ, ಕುವೆಂಪು ಆಣೆ, ಕನಕದಾಸರ ಆಣೆ, ಶಿಶುನಾಳ ಶರೀಫರ ಆಣೆ ಈಗಾಗಲೇ ಕಾಂಗ್ರೆಸ್ ಘೋಷಿಸಿದಂತೆ ಪ್ರತಿಯೊಬ್ಬರ ಮನೆಗೆ 200 ಯುನಿಟ್ ಕರೆಂಟ್ ಕೊಟ್ಟೇ ಕೊಡುತ್ತೇವೆ ಎಂದ ಅವರು, ಎಲ್ಲಿಂದ ವಿದ್ಯುತ್ ತರುತ್ತೇವೆ. ಉಚಿತ ವಿದ್ಯುತ್ ನೀಡಲು ಸಾಧ್ಯವಾಗುವುದಿಲ್ಲ ಎಂದು ಸಚಿವ ಅಶೋಕ್ ಕೇಳುತ್ತಾರೆ. ಮುಖ್ಯಮಂತ್ರಿ ಬೊಮ್ಮಾಯಿ ಸಚಿವರನ್ನು ಕಳುಹಿಸಿ ಕೊಡಿ ಇಲ್ಲವೇ ಮಾಧ್ಯಮವನ್ನು ನಮ್ಮ ಬಳಿ ಕಳುಹಿಸಿ ಕೊಡಿ ವಿದ್ಯುತ್ ಹೇಗೆ ತರಲುತ್ತೇವೆ. ಹೇಗೆ ಉಚಿತವಾಗಿ ಜನರಿಗೆ ಕೊಡುತ್ತೇವೆ ಎಂದು ನಿಮ್ಮವರಿಗೆ ಹೇಳುತ್ತೆವೆ. ಶೋಭಕ್ಕ ಹಾಗೂ ಯಡಿಯೂರಪ್ಪ ಸೇರಿ ಒಂದು ಸೀರೆ, ಸೈಕಲ್ ನೀಡಿದರು ಅಷ್ಟೇ. ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡು ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ಎಲ್ಲರಿಗೂ ನೀಡುತ್ತೇವೆ ಎಂದು ಹೇಳಿದರು.

ಪ್ರತಿ ಮನೆ ಪ್ರತಿ ತಿಂಗಳು ಯಜಮಾನಿಗೆ ₹ 2 ಸಾವಿರ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ.‌ ಈಗ ಬೊಮ್ಮಾಯಿ‌ ಮುಂಬರುವ ಬಜೆಟ್ ನಲ್ಲಿ ನಾವು ಘೋಷಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಲ್ಲಿರುವಾಗ ಮಾಡದ ಕೆಲಸವನ್ನು ಕೆಳಗೆ ಇಳಿಯುವಾಗ ಮಾಡ್ತಿರಾ? ಎರಡು ತಿಂಗಳಾದ ಮೇಲೆ ನೀವು ಮಾಜಿ ಮುಖ್ಯಮಂತ್ರಿ ಎಂದರು.

ಕಾಂಗ್ರೆಸ್ ಸೇರಲು ಬಿಜೆಪಿ ಶಾಸಕರು ಸೇರಿದಂತೆ ಅನೇಕ ಮುಖಂಡರು ಸಿದ್ದರಾಗಿದ್ದಾರೆ. ನಂತರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ರಾಜ್ಯಕ್ಕೆ ಬಂದಿರುವ ಪ್ರಧಾನಿ 40% ಕೆಂಪಣ್ಣ ಆರೋಪಕ್ಕೆ ಉತ್ತರ ಕೊಡಲಿ. ಬಿಜೆಪಿ‌ ಸರ್ಕಾರ ಅನೈತಿಕ ಮಾರ್ಗದಿಂದ ರಚನೆಯಾಗಿದೆ. ಜನರು ಈ ಸರ್ಕಾರಕ್ಕೆ ಆಶೀರ್ವಾದ ಮಾಡಿರಲಿಲ್ಲ. ಕೋಟ್ಯಾಂತರ ರೂಪಾಯಿ ಖರ್ಚು‌ ಮಾಡಿ ಶಾಸಕರನ್ನು ಖರೀದಿ ಮಾಡಿದ್ದಾರೆ. ಕೋವಿಡ್ ಬಂದಾಗ ಮೂರು ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ರು.‌ಅಧಿವೇಶನದಲ್ಲಿ ನಾವು ದಾಖಲೆ ಸಮೇತ ಪ್ರಸ್ತಾಪ ಮಾಡಿದ್ದೆವು. ಕೊರೊನಾದಿಂದ ಮೃತರಾದವರಿಗೆ ಸರಿಯಾದ ಪರಿಹಾರ ನೀಡಲಿಲ್ಲ. ರಾಜ್ಯ ಕಂಡ ಅತ್ಯಂತ ದುರ್ಬಲ, ಭ್ರಷ್ಟ ಮುಖ್ಯಮಂತ್ರಿ ಅಂದ್ರೆ ಬಸವರಾಜ ಬೊಮ್ಮಾಯಿ ಎಂದು ಆರೋಪಿಸಿದರು.

Verified by MonsterInsights