ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್: ಮತದಾರರ ಆಕ್ರೋಶ

ಡೆಸ್ಕ್
2 Min Read

ತುಮಕೂರು: ತುಮಕೂರು ನಗರದಲ್ಲೇ ಹುಟ್ಟಿ ಬೆಳೆದು, ತುಮಕೂರು ನಗರದಲ್ಲೇ ವಾಸವಿರುವ ನನ್ನನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು ಜಿಲ್ಲಾಧ್ಯಕ್ಷ ಉಮಾಶಂಕರ್ (ಉಮೇಶ್) ಮಹಾನಗರ ಪಾಲಿಕೆ ಚುನಾವಣಾಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ತುಮಕೂರು ನಗರದಲ್ಲಿ ಕೆಲವರು ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಮಾಡಿದ್ದಾರೆ ಎಂದು ನಗರದ ಕೆಲವರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತಿಗೆ ಮೌಖಿಕವಾಗಿ ದೂರು ನೀಡಿದ್ದಾರೆ. ಈ ಸಂಬಂಧ ನಾನು ಮಹಾನಗರ ಪಾಲಿಕೆ ಆವರಣದಲ್ಲಿರುವ ಚುನಾವಣಾ ಶಾಖೆಗೆ ತೆರಳಿ ವಿಚಾರಿಸಿದಾಗ ನನ್ನ ಹೆಸರನ್ನೇ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಕಿಡಿಕಾರಿದರು.

ಇದು ನನ್ನ ಒಬ್ಬನ ಸಮಸ್ಯೆಯಲ್ಲ ತುಮಕೂರು ನಗರದ 35 ವಾರ್ಡುಗಳಲ್ಲೂ ಇದೇ ರೀತಿ ಆಗಿವೆ ಎಂಬುದು ತಿಳಿದು ಬಂದಿದೆ. ಹೋರಾಟಗಾರನಾದ ನಾನು ನನ್ನ ಹೆಸರನ್ನೇ ಡಿಲೀಟ್ ಮಾಡಲಾಗಿದೆ ಎಂದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದಿದ್ದಾರೆ.

2013 ಮತ್ತು 2018 ರಲ್ಲಿ ತುಮಕೂರು ಮಹಾನಗರ ಪಾಲಿಕೆ ಚುನಾವಣೆಗೆ ನನ್ನ ಪತ್ನಿ ಚರಿತ್ರ ಉಮಾಶಂಕರ್ ಸ್ಪರ್ಧಿಸಿದ್ದರು. ಹೀಗಿರುವಾಗ ನಮ್ಮ ಕುಟುಂಬದಲ್ಲಿ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ಕಾರಣವೇನು ಎಂಬುದಕ್ಕೆ ಈವರೆಗೂ ಯಾರೂ ಸಹ ಉತ್ತರಿಸುತ್ತಿಲ್ಲ, ಇದು ಅಧಿಕಾರಿಗಳ ಬೇಜವಬ್ದಾರಿಯೋ ಅಥವಾ ರಾಜಕಾರಣಿಗಳ ಕುತಂತ್ರವೋ, ಅಥವಾ ಬೂತ್ ಮಟ್ಟದಲ್ಲಿ ನಡೆದಿರುವ ಷಡ್ಯಂತ್ರವೋ ಎಂಬುದು ಬಹಿರಂಗವಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಬಿಎಲ್‌ಒಗಳು ಸರಿಯಾಗಿ ಕೆಲಸ ನಿರ್ವಹಿಸಿದ್ದರೆ ಈ ರೀತಿಯ ಎಡವಟ್ಟುಗಳು ಆಗುತ್ತಿರಲಿಲ್ಲ, ಸತ್ತಿರುವವರ ಹೆಸರು ಅಥವಾ ವಿಳಾಸದಲ್ಲಿ ಇಲ್ಲದೇ ಇರುವವರ ಹೆಸರು ಡಿಲೀಟ್ ಆಗುವುದು ಸಹಜ ಆದರೆ ನಾನಿನ್ನೂ ಜೀವಂತವಾಗಿದ್ದೇನೆ, ಮನೆಯ ವಿಳಾಸವೂ ಬದಲಾಗಿಲ್ಲ, ಅಂತಹುದರಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರನ್ನು ಯಾಕೆ ಡಿಲೀಟ್ ಮಾಡಲಾಗಿದೆ ಎಂಬುದಕ್ಕೆ ಚುನಾವಣಾಧಿಕಾರಿಗಳು ಉತ್ತರಿಸಬೇಕಿದೆ ಎಂದಿದ್ದಾರೆ.

ಈ ಬಗ್ಗೆ ಮಹಾನಗರ ಪಾಲಿಕೆ ಆವರಣದಲ್ಲಿರುವ ಚುನಾವಣಾ ಶಾಖೆಗೆ ತೆರಳಿ ವಿಚಾರಿಸಿದರೆ ಕಳೆದ 15 ದಿನಗಳಿಂದ ಅಲೆದಾಡಿಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸ್ವಲ್ಪ ದಿನ ಹೀಗೇ ಸಬೂಬು ಹೇಳಿ ಕಾಲ ಕಳೆಯೋಣ ಎಂದು ತಿಳಿದಿದ್ದರೆ, ಶೀಘ್ರದಲ್ಲೇ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಉಮಾಶಂಕರ್ ಎಚ್ಚರಿಸಿದ್ದಾರೆ.

ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು ಜಿಲ್ಲಾ ಕಾರ್ಯಾಧ್ಯಕ್ಷ ದೊಡ್ಡಯ್ಯ ಮಾತನಾಡಿ, ಮತದಾರರ ಪಟ್ಟಿಯಲ್ಲಿರುವ ಕೆಲವರ ಹೆಸರನ್ನು ಉದ್ದೇಶಪೂರ್ವಕವಾಗಿ ತೆಗೆಯಲಾಗಿದೆ. ಯಾವುದೇ ರೀತಿಯ ಮುನ್ಸೂಚನೆ ನೀಡದೇ ಕೆಲ ಮತದಾರರ ಹೆಸರು ಅಳಿಸಿ ಹಾಕಲಾಗಿದೆ. ಹೋರಾಟಗಾರರಾದ ಉಮಾಶಂಕರ್ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿಯಿಂದ ಉಮಾಶಂಕರ್ ಸೇರಿದಂತೆ ಹಲವರು ಹೆಸರನ್ನು ಉದ್ಧೇಶಪೂರ್ವಕವಾಗಿ ಡಿಲೀಟ್ ಮಾಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು ನಗರಾಧ್ಯಕ್ಷ ಟಿ.ಜಿ.ರಮೇಶ್, ಯೋಗೀಶ್, ಮೋಹನ್, ಪ್ರಕಾಶ್ ಮತ್ತಿತರರು ಖಂಡಿಸಿದ್ದಾರೆ.

Share this Article
Verified by MonsterInsights