ಪಾಲಿಕೆ ಅಧ್ವಾನಕ್ಕೆ ಹೊಣೆ ಯಾರು?
ತುಮಕೂರು: ಕಳೆದ ಕೆಲವು ತಿಂಗಳ ಹಿಂದೆ ಪೌರ ಕಾರ್ಮಿಕರಿಗೆ ಪಾಲಿಕೆ ನೀಡಿದ್ದ ಆಹಾರದಲ್ಲಿ ಸತ್ತ ಜಿರಳೆ ಪತ್ತೆಯಾಗಿದ್ದ ಘಟನೆ ಮರೆಯಾಗುವ ಮೊದಲೇ ಈಗ ಪತ್ತೆ ಜಿರಳೆ ಪತ್ತೆಯಾಗಿರುವುದು ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಅವರ ವಾರ್ಡ್ ನಲ್ಲಿಯೇ ಪೌರ ಕಾರ್ಮಿಕರಿಗೆ ಜಿರಳೆಯುಕ್ತ ಬೆಳಗಿನ ಉಪಹಾರವನ್ನು ವಿತರಿಸಿದರೆ ಬೇರೆ ಕಡೆಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎನ್ನುವಂತಾಗಿದೆ.
ಕಳೆದ ಬಜೆಟ್ ನಲ್ಲಿ ಪಾಲಿಕೆಯ 400 ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಲು 50 ರೂ ತಲಾ ಒಬ್ಬರಿಗೆ ನಿಗದಿಸಿ ಗುತ್ತಿಗೆ ನೀಡಲಾಗಿತ್ತು, ಬೆಳಗಿನ ಉಪಹಾರದೊಂದಿಗೆ 2 ಮೊಟ್ಟೆ ನೀಡುವುದಾಗಿ ಸರ್ಕಾರದ ದರಕ್ಕಿಂತ ಹೆಚ್ಚಿನ ದರವನ್ನು ಪಾಲಿಕೆ ಪೌರ ಕಾರ್ಮಿಕರ ಬೆಳಗಿನ ಉಪಹಾರಕ್ಕಾಗಿ ವೆಚ್ಚ ಮಾಡಲಾಗುತ್ತಿದೆ.
ಪೌರ ಕಾರ್ಮಿಕರಿಗೆ ಸಿದ್ಧವಾಗುವ ಬೆಳಗಿನ ಉಪಹಾರದ ಸಿದ್ಧತೆ ಹಾಗೂ ಗುಣಮಟ್ಟದ ಪರಿಶೀಲನೆಗೆ ಆರೋಗ್ಯ ನಿರೀಕ್ಷಕರನ್ನು ನಿಯೋಜಿಸಲಾಗುತ್ತಿದೆ ಆದರೂ ಇಂತಹ ಯಡವಟ್ಟುಗಳು ಪದೆಪದೇ ನಡೆಯುತ್ತಿರುವುದು ಏಕೆ ಎಂಬ ಪ್ರಶ್ನೆ ಪೌರ ಕಾರ್ಮಿಕರಲ್ಲಿ ಕಾಡುತ್ತಿದೆ.
ಪೌರ ಕಾರ್ಮಿಕರ ಉಪಹಾರದಲ್ಲಿಯೂ ಕಮೀಷನ್
ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಪೌರ ಕಾರ್ಮಿಕರ ಉಪಹಾರದಲ್ಲಿಯೂ ಕಮೀಷನ್ ಗೆ ಕೈಯೊಡ್ಡಿದ್ದಾರೆಯೇ? ಎಂಬ ಅನುಮಾನಗಳು ವ್ಯಕ್ತವಾಗಿದ್ದು, ಜಿಲ್ಲೆಯ ಪ್ರಭಾವಿ ರಾಜಕಾರಣಿ ಸಂಬಂಧಿಕ ಎಂದು ಹೇಳಿಕೊಳ್ಳುವ ಅಧಿಕಾರಿಯಿಂದಲೇ ಇಂತಹ ಎಡವಟ್ಟುಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಪಾಲಿಕೆಯ ಎಲ್ಲ ವ್ಯವಹಾರದಲ್ಲಿಯೂ ಕಮೀಷನ್ ತಾಂಡವವಾಡುತ್ತಿದ್ದು, ಕಮೀಷನ್ ಇಲ್ಲದೇ ಯಾವ ಕಡತಗಳಿಗೂ ಸಹಿ ಹಾಕುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರನ ನಡುವಿನ ಆಡಿಯೋ ಇತ್ತಿಚೆಗೆ ವೈರಲ್ ಆಗಿತ್ತು.
ಕಳೆದೊಂದು ವರ್ಷದಿಂದ ಆಹಾರ ಪೂರೈಕೆ ಮಾಡುತ್ತಿರುವ ಸಂಸ್ಥೆಯೇ ಈಗಲೂ ಆಹಾರ ಪೂರೈಕೆ ಮಾಡುತ್ತಿದ್ದು, ಕಳೆದ ತಿಂಗಳಿಂದ ಈಚೆಗೆ ಇಂತಹ ಆರೋಪಗಳು ಕೇಳಿಬರುತ್ತಿದ್ದು, ಹೆಚ್ಚಿನ ಕಮೀಷನ್ ಆಸೆಗೆ ಈಗ ಪೌರ ಕಾರ್ಮಿಕರಿಗೆ ಆಹಾರ ಪೂರೈಕೆ ಮಾಡುತ್ತಿರುವ ಸಂಸ್ಥೆಗೆ ಗುತ್ತಿಗೆ ತಪ್ಪಿಸಲು ಹುನ್ನಾರ ಮಾಡಲಶಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಪಾಲಿಕೆ ಅಧಿಕಾರಿಗಳ ಯವವಟ್ಟಿಗೆ ಹೊಣೆ ಹೊರುವರು ಯಾರು ಎನ್ನುವಂತಾಗಿದ್ದು, ಪಾಲಿಕೆಯಲ್ಲಿ ಬೇರು ಬಿಟ್ಟಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಿದೆ ಎಂದು ಕೆಆರ್ ಎಸ್ ಪಕ್ಷದ ಮುಖಂಡ ನಾಗೇಂದ್ರ ಒತ್ತಾಯಿಸಿದ್ದಾರೆ.