ಬ್ರಾಹ್ಮಣ, ಬಂಡವಾಳ ಶಾಹಿ ವ್ಯವಸ್ಥೆ ಶೂದ್ರ, ದಮನಿತರ ದೊಡ್ಡ ಶತ್ರುಗಳು

ತುಮಕೂರು: ಬ್ರಾಹ್ಮಣಶಾಹಿ ವ್ಯವಸ್ಥೆ ಮತ್ತು ಬಂಡವಾಳಶಾಹಿ ವ್ಯವಸ್ಥೆ ಈ ದೇಶದ ಶೂದ್ರರ ಮತ್ತು ದಮನಿತರ ಬಹುದೊಡ್ಡ ಶತ್ರುಗಳು ಎಂದು ಚಿಂತಕ ಶಿವಸುಂದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಭವನದಲ್ಲಿ ನಡೆದ ವಿಶ್ವರತ್ನ ಪ್ರತಿಷ್ಠಾನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ದೇಶದ ಶತ್ರು ಜಾತಿ ಎನ್ನುವುದನ್ನು ಮನಗಂಡಿದ್ದ ಅಂಬೇಡ್ಕರ್ ರವರು ಸಂಪತ್ತು ರಾಷ್ಟ್ರೀಕರಣವಾಗಬೇಕು, ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು, ಆಗ ಜಾತಿ ಧರ್ಮ ಸಮಾಜದಿಂದ ಕಣ್ಮರೆಯಾಗುತ್ತದೆ ಎಂದು ಕನಸು ಕಂಡಿದ್ದರು ಎಂದರು.

ಅಂಬೇಡ್ಕರ್ ಅಂದಿನ ಬಹುದೊಡ್ಡ ಮನುವಾದಿ ಶಕ್ತಿಗಳನ್ನು ಎದುರಿಸಲು ಸಾಧ್ಯವಾಗಿದ್ದು ನೈತಿಕ ಸ್ಥೈರ್ಯದಿಂದ, ಆದರೆ ಇಂದಿನ ಅಧಿಕಾರಿಶಾಹಿ ಮತ್ತು ಜನರು ಒಂದು ರೀತಿಯ ಭೌದ್ಧಿಕ ಗುಲಾಮರಾಗಿ ಬದುಕುತ್ತಿದ್ದಾರೆ ಎಂದರು.

ಸಂವಿಧಾನ ಅಂಗೀಕರಿಸುವ ಸಂದರ್ಭದಲ್ಲಿಯೇ ಅಂಬೇಡ್ಕರ್ ರವರು ಭಾರತ ವೈರುಧ್ಯಗಳ ಯುಗಕ್ಕೆ ಕಾಲಿಡುತ್ತಿದೆ, ಜಾತಿ ಮತ್ತು ಬಂಡವಾಳಶಾಹಿ ವ್ಯವಸ್ಥೆಯಿಂದ ಸಾಮಾಜಿಕ ಮತ್ತು ಆರ್ಥಿಕ ಪ್ರಜಾತಂತ್ರ ಮಾರಕವಾಗಲಿದೆ ಎಂದು ಎಚ್ಚರಿಸಿದ್ದರು ಎಂದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವಾಗ, ಎಲ್ಲಾ ಕ್ಷೇತ್ರ‍ಗಳಲ್ಲಿ ಖಾಸಗೀಕರಣವೇ ಪಾರುಪತ್ಯ ಮೆರೆಯುತ್ತಿರುವಾಗ, ಸರ್ಕಾರಗಳು ದಮನಿತರಿಗೆ ಮೀಸಲಾತಿ ಹೆಚ್ಚು ಮಾಡಿದರೂ ಪ್ರಯೋಜನವಿಲ್ಲ. ಖಾಸಗೀವಲಯದಲ್ಲಿಯೂ ಮೀಸಲಾತಿ ತರಬೇಕು. ಮೀಸಲಾತಿ ಹೆಚ್ಚಳ ಕೇವಲ ಮನುವಾದಿಗಳ ಕುತಂತ್ರವಷ್ಟೇ ಎಂದ ಅವರು ಅಂಬೇಡ್ಕರ್ ಹೆಸರಿನ ಜೊತೆಗೆ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವ, ಅವುಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಅಂಬೇಡ್ಕರ್ ರವರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳುವ ಮನುವಾದಿಗಳು ಅದೇ ಅಂಬೇಡ್ಕರ್ ರವರನ್ನು ಸಂವಿಧಾನ ರಚನಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು, ಅವರು ರಚಿಸಿದ ಸಂವಿಧಾನವನ್ನ ಅನುಷ್ಠಾನ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ಮರೆತಿದ್ದಾರೆ ಎಂದು ಪ್ರಶ್ನೆ ಮಾಡಿದರು.

ವಿಚಾರ ಸಂಕಿರಣದಲ್ಲಿ ಸಿದ್ಧರಾಜು, ಅಕ್ಕ ಐಎಎಸ್ ಅಕಾಡೆಮಿಯ ಡಾ. ಶಿವಕುಮಾರ್ ವಿಚಾರ ಮಂಡಿಸಿದರು. ವಿಶ್ವರತ್ನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಚಿಕ್ಕಣ್ಣ, ದಲಿತ ಮುಖಂಡ ಸಿ ಭಾನುಪ್ರಕಾಶ್, ಡಾ ಮಹೇಶ್ ಡಾ. ಮಹಾಲಿಂಗ ಕೆ. ಡಾ. ಪವನಗಂಗಾಧರ, ಡಾ. ರಮೇಶ್ ಮಣ್ಣೆ, , ಶ್ರೀನಿವಾಸ್ ಗಂಗಾತನಯಶ್ರೀ, ಡಾ. ಧರ್ಮವೀರ್ ಇತರರಿದ್ದರು.

Verified by MonsterInsights