ತುಮಕೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಬೆಂಬಲಿಗ ಚಂದ್ರಶೇಖರ್ ಗೌಡ ಇಂದು ಸಾಂಕೇತಿಕವಾಗಿ ಅಧಿಕಾರ ಸ್ವೀಕಾರ ಮಾಡಿದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಆರ್.ರಾಮಕೃಷ್ಣ ಕಾಂಗ್ರೆಸ್ ಭಾವುಟವನ್ನು ಹಸ್ತಾಂತರಿಸಿದರು.
ನಿರ್ಗಮಿತ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಡಾ.ಜಿ.ಪರಮೇಶ್ವರ್ ಅವರ ಆರ್ಶೀವಾದದಿಂದಾಗಿ ಡಿಸಿಸಿ ಅಧ್ಯಕ್ಷನಾಗಿ ಆರು ವರ್ಷವ ಕೆಲಸ ಮಾಡಿದ್ದೇನೆ, ಆತ್ಮತೃಪ್ತಿಯಿಂದ ಅಧಿಕಾರವನ್ನು ಹಸ್ತಾಂತರಿಸಿದ್ದೇನೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಯಾಗಿದ್ದರಿಂದ ಚುನಾವಣೆಯಲ್ಲಿ ಸೋತಿದ್ದೇವೆ, ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ, ಅಧಿಕಾರದಲ್ಲಿ ಇದ್ದಾಗ ಪರ-ವಿರೋಧ ಸಹಜ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಿರ್ವಹಿಸಿದ ಆತ್ಮತೃಪ್ತಿ ಇದೆ ಎಂದು ಹೇಳಿದರು.
ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ, ಪಕ್ಷ ಅಧಿಕಾರದಲ್ಲಿ ಇದ್ದರೆ ಎಲ್ಲರಿಗೂ ಅನುಕೂಲವಾಗುತ್ತದೆ, ಎಲ್ಲರೂ ಸಂಘಟಿತವಾಗಿ ಹೋರಾಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸೋಣ, ಚಂದ್ರಶೇಖರ್ ಗೌಡ ಅವರಿಗೆ ಸಹಕಾರ ನೀಡೋಣ ಎಂದರು
ನೂತನ ಅಧ್ಯಕ್ಷ ಚಂದ್ರಶೇಖರ್ ಗೌಡ ಮಾತನಾಡಿ, ಪಕ್ಷದ ಅಧ್ಯಕ್ಷರ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ನಮಗೆ ವಹಿಸಿದ್ದಾರೆ, ಅಧಿಕಾರ ನೀಡಲು ಜಿಲ್ಲೆಯ ಮುಖಂಡರು ಸಹಕಾರ ನೀಡಿದ್ದಾರೆ, ಅವರಿಗೆಲ್ಲರಿಗೂ ಅಭಿನಂದಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವಂತೆ ಹಿಂದುಳಿದ ವರ್ಗದ ನನ್ನನ್ನು ಆಯ್ಕೆ ಮಾಡಿರುವುದಾಗಿ ಡಾ.ಜಿ.ಪರಮೇಶ್ವರ್ ತಿಳಿಸಿದರು, ಕಾಂಗ್ರೆಸ್ ನಲ್ಲಿ ವ್ಯಕ್ತಿ ಗಾಗಿ ಅಧಿಕಾರ ಎನ್ನುವ ಬದಲಾಗಿ ಸಮೂಹಕ್ಕಾಗಿ ಅಧಿಕಾರ ಎನ್ನುವ ಭಾವನೆ ಇದೆ ಎಂದರು.
ಕಾಂಗ್ರೆಸ್ ಹನ್ನೊಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಎಲ್ಲ ಮುಖಂಡರು ಸಹಕಾರ ನೀಡಬೇಕು, ಮಾರ್ಗದರ್ಶನವನ್ನು ಮಾಡಬೇಕು, ಪಕ್ಷ ಅಧಿಕಾರಕ್ಕೆ ತರಲು ತಪ್ಪುಗಳನ್ನು ತಿದ್ದಿಕೊಂಡು ಮುನ್ನೆಡೆಯೋಣ ಎಂದು ಹೇಳಿದರು.
ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ, ಮೇಯರ್ ಪ್ರಭಾವತಿ, ಮಾಜಿ ಉಪ ಮೇಯರ್ ರೂಪಾ, ಡಾ.ಫರ್ಹಾನ ಬೇಗ್, ಮುಖಂಡರಾದ ಹೆಚ್.ಡಿ.ಹನುಮಂತಯ್ಯ, ಮರಿಚೆನ್ನಮ್ಮ, ರೆಡ್ಡಿಚಿನ್ನಯಲ್ಲಪ್ಪ, ನರಸೀಯಪ್ಪ, ಲಿಂಗರಾಜು, ಪುರುಷೋತ್ತಮ್ ಇತರರಿದ್ದರು.