ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದ ಶ್ರೀ ಕೆಂಪಮ್ಮದೇವಿ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ‘ನಮ್ಮ ಆರೋಗ್ಯ ಕೇಂದ್ರ ಉದ್ಘಾಟನೆ ಮತ್ತು ಬಹಿರಂಗ ಸಭೆ’ ಉದ್ದೇಶಿಸಿ ಕಾಂಗ್ರೆಸ್ ಮುಖಂಡ ಹಾಗೂ ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ಮಾತನಾಡಿ, ಇಂದು ಶೇ. ೯೮ರಷ್ಟು ಹೆಣ್ಣು ಮಕ್ಕಳು ಮನೆಯ ಒಳಗೆ ಮತ್ತು ಹೊರಗೂ ದುಡಿಯುತ್ತಿದ್ದಾರೆ. ಆದರೆ ಅವರ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆಯಾ ಎಂದು ನಾವು ಯೋಚಿಸಬೇಕಾಗಿದೆ ಎಂದರು.
ನಾನು ಇಂದು ಹೆಣ್ಣುಮಕ್ಕಳಲ್ಲಿ ಒಂದು ಕನಸು ತುಂಬಲು ಬಂದಿದ್ದೇನೆ, ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬೆಳೆದು ಮುಂದೆ ಬರಬೇಕಿದೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ ಹಾಗೆ ಹೆಣ್ಣು ಗಂಡು ಇಬ್ಬರೂ ಸಮಾನರು. ವೈಜ್ಷಾನಿಕವಾಗಿ ಇಷ್ಟೊಂದು ಬೆಳವಣಿಗೆ ಆಗಿರುವ ಸಂದರ್ಭದಲ್ಲಿಯೂ ಇಂದು ಮಹಿಳೆಯರ ಅದರಲ್ಲೂ ಗ್ರಾಮಾಂತರ ಹೆಣ್ಣುಮಕ್ಕಳ ಶೋಷಣೆ ನಿಂತಿಲ್ಲ ಎಂದು ತಿಳಿಸಿದರು.
ಮನೆಯಲ್ಲಿ ಒಬ್ಬ ಹೆಣ್ಣುಮಗಳು ಋತುಮತಿಯಾದರೆ ಅವಳಿಗೆ ಸೂಕ್ತವಾದ ಸಮಾಲೋಚನೆ ಸಿಗುತ್ತಿಲ್ಲ. ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಉಪಯೋಗಿಸುವುದೂ ತಿಳಿದಿರುವುದಿಲ್ಲ. ಅವರಿಗೆ ನೀಡಬೇಕಾದ ಸಲಹೆ ಸೂಚನೆ ಸರಿಯಾಗಿ ನೀಡಿ ಅವರಲ್ಲಿ ಆತ್ಮಸ್ಥೆರ್ಯ ತುಂಬಿದರೆ ಹಿಂಜರಿಕೆ ಹೋಗುತ್ತದೆ. ಓ್ವಟರ್‌ನಲ್ಲಿ ಹ್ಯಾಪಿ ಟು ಬ್ಲೀಡ್ ಎನ್ನುವ ಹ್ಯಾಷ್‌ಟ್ಯಾಗ್ ಕೋಟ್ಯಂತರ ಟ್ವೀಟ್ ಆಗಿತ್ತು. ಆದರೆ ಅದನ್ನು ಬೆಂಬಲಿಸಿದ ನನಗೆ ವ್ಯಂಗ್ಯ, ಮೂದಲಿಕೆ ಮಾಡಿದರು. ಪ್ರತಿ ಮನೆಯಲ್ಲೂ ಹೆಣ್ಣು ಮಕ್ಕಳ ಈ ಕಷ್ಟ ಅವರ ತಂದೆ-ಗಂಡ-ಅಣ್ಣಂದಿರಿಗೆ ತಿಳಿದು ಅವರಿಗೆ ಸಿಗಬೇಕಾದ ಗೌರವ, ಆಧ್ಯತೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ಟಿಸ್ಟ್ ಫಾರ್ ಹರ್ ಅಧ್ಯಕ್ಷೆ ಹೇಮಾ ದಿವಾಕರ, ಹಾಲ್ಕುರಿಕೆ ಗ್ರಾಪಂ ಅಧ್ಯಕ್ಷ ಉಮಾಮಹೇಶ್, ಮಾಜಿ ಜಿಪಂ ಸದಸ್ಯರಾದ ತ್ರಿಯಂಬಕ, ಮಮತ, ತಾಪಂ ಮಾಜಿ ಅಧ್ಯಕ್ಷ ಪರಮಶಿವಯ್ಯ, ಮಹಿಳಾ ಮುಖಂಡರಾದ ಪುಷ್ಪ, ಭವ್ಯ, ಶಿವಮ್ಮ, ಮಮತ, ಸುಶೀಲಮ್ಮ, ಗೀತ, ನೇತ್ರಾವತಿ ಮತ್ತು ಸುಮಲತ ಹಾಗೂ ಸ್ಟಾಟ್ರಜಿಸ್ಟ್ ಎಂ.ಜೆ.ಶ್ರೀಕಾಂತ್ ಸೇರಿದಂತೆ ಗ್ರಾಮಪಂಚಾಯಿತಿ ಸದಸ್ಯರುಗಳು ಮತ್ತು ಮಹಿಳಿಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.