ತುಮಕೂರು: ಹೃದಯದ ನಂತರ ಪ್ರಮುಖ ಅಂಗವಾಗಿ ಕಣ್ಣಿನ ಚಿಕಿತ್ಸಾ ಕೇಂದ್ರ ರಾಜ್ಯಾದ್ಯಂತ ಪ್ರಾರಂಭಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ನಾರಾಯಣ ನೇತ್ರಾಲಯದ ನಾರಾಯಣ ದೇವಾಲಯ ಉಚಿತ ನೇತ್ರಾ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ 25 ವರ್ಷಗಳಿಂತಲೂ ಹೆಚ್ಚು ಕಾಲ ಕಣ್ಣಿನ ರೋಗಗಳ ನಿವಾರಣೆಗೆ ಡಾ.ಭುಜಂಗಶೆಟ್ಟರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಎಂದರು.
ನೇತ್ರದಾನ ಅಭಿಯಾನ ಪ್ರಾರಂಭಿಸಿ ಡಾ.ರಾಜ್ ಕುಮಾರ್ ಅವರಿಂದ ಪುನೀತ್ ರಾಜ್ ಕುಮಾರ್ ರವರಿಗೆ ನೇತ್ರಾದಾನಕ್ಕೆ ಪ್ರೇರಣೆಯಾಗಿದ್ದು, ಡಾ.ಭುಜಂಗಶೆಟ್ಟರು, ಇಂದು ಕ್ಯಾಶ್ ಕೌಂಟರ್ ಇಲ್ಲದ ಸೇವೆಗಾಗಿ ಇಂದು ನಾರಾಯಣ ದೇವಾಲಯ ಆರಂಭಿಸಿದ್ದಾರೆ ಎಂದರು.
ಗುಣಮಟ್ಡದ ಚಿಕಿತ್ಸೆ ಒದಗಿಸಲು ಅತ್ಯಾಧುನಿಕ, ಪರಿಣಿತ ವೈದ್ಯರಿಂದ ಉಚಿತವಾಗಿ ಚಿಕಿತ್ಸೆ ಒದಗಿಸಲು ನಾರಾಯಣ ದೇವಾಲಯ ಪ್ರಾರಂಭವಾಗಿದ್ದು, ಬಡವರಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಒದಗಿಸುವ ವ್ಯವಸ್ಥೆ ರಾಜ್ಯದಲ್ಲಿ ಆಗಬೇಕಿದೆ ಎಂದರು.
ಸರ್ಕಾರ ಬಡವರಿಗಾಗಿ ಆಯುಷ್ಮಾನ್ ಭಾರತ ಕಾರ್ಡ್ ನೀಡುತ್ತಿದೆ, ರಾಜ್ಯದಲ್ಲಿ ಐದು ಕೋಟಿ ಕಾರ್ಡ್ ವಿತರಿಸುವ ಧ್ಯೇಯ ಹೊಂದಲಾಗಿದ್ದು, ಒಂದು ಕೋಟಿ ಕಾರ್ಡ್ ವಿತರಿಸಲಾಗಿದೆ, ಬಡವರಿಗೆ ಗುಣಮಟ್ಟದ ವೈದ್ಯಕೀಯ ಸವಲತ್ತು ದೊರೆಯಬೇಕಾದರೆ ವೈದ್ಯಕೀಯ ವೆಚ್ವ ಕಡಿಮೆಯಾಗಬೇಕು ಈ ನಿಟ್ಟಿನಲ್ಲಿ ಎಲ್ಲ ವೈದ್ಯಕೀಯ ಸಂಸ್ಥೆಗಳು ಚಿಂತನೆ ನಡೆಸಬೇಕೆಂದರು.
ನಾರಾಯಣ ನೇತ್ರಾಲಯದ ಟ್ರಸ್ಟಿ ಡಾ.ಭುಜಂಗಶೆಟ್ಟಿ ಮಾತನಾಡಿ, ಕೊರೋನಾದ ನಡುವೆಯೂ ಒಂದು ವರ್ಷದ ಅವಧಿಯಲ್ಲಿ ಆಸ್ಪತ್ರೆ ನಿರ್ಮಾಣವಾಗಲು ಸಿದ್ಧಲಿಂಗಸ್ವಾಮೀಜಿ ಕಾರಣ, ನಾರಾಯಣ ಸೇವೆ ಮಾಡಲು ಇವತ್ತು ಈ ಆಸ್ಪತ್ರೆಯಲ್ಲಿ ರೋಗಿಗಳೇ ದೇವರಾಗುತ್ತಿದ್ದಾರೆ, ವೈದ್ಯರು ಸೇವೆ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಆರೋಗ್ಯಕ್ಕೆ ಒತ್ತು ನೀಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನಾರಾಯಣ ನೇತ್ರಾಲಯದ ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಬೇಕೆಂಬ ಧ್ಯೇಯವನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ಧಲಿಂಗ ಸ್ವಾಮೀಜಿ ವಹಿಸಿದ್ದರು, ಸಚಿವರಾದ ಗೋವಿಂದ ಕಾರಜೋಳ, ಬಿ.ಸಿ.ನಾಗೇಶ್, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಶಾಸಕರಾದ ಜ್ಯೋತಿಗಣೇಶ್, ಸಿ.ಎಂ.ರಾಜೇಶ್ ಗೌಡ, ಡಾ.ಭುಜಂಗಶೆಟ್ಟಿ, ರೋಹಿತ್ ಶೆಟ್ಟಿ ಸೇರಿದಂತೆ ಇತರರಿದ್ದರು.