ನಾಡ ಹಬ್ಬವಾಗಿ ಬಳ್ಳಾರಿ ಉತ್ಸವ ಶಾಶ್ವತವಾಗಿ ಆಯೋಜನೆ: ಸಚಿವ ಶ್ರೀರಾಮುಲು

 

ಮೊದಲ ಬಾರಿಗೆ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವವನ್ನು ನಾಡ ಹಬ್ಬವಾಗಿ ಶಾಶ್ವತವಾಗಿ ಆಯೋಜಿಸಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರ ಮುನ್ಸಿಪಲ್ ಮೈದಾನದ‌ ರಾಘವ ವೇದಿಕೆಯಲ್ಲಿ ಶನಿವಾರ ಆಯೋಜಿಸಲಾದ ಬಳ್ಳಾರಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಳ್ಳಾರಿ ಉತ್ಸವಕ್ಕೆ ನಗರ ಮದುವಣಗಿತ್ತಿಯಂತೆ‌ ಅಲಂಕೃತವಾಗಿದೆ. ಇಂದು ಚಾಲನೆ ನೀಡಿರುವ ಉತ್ಸವದ ರಥವನ್ನು ಮುಂದಿನ ದಿನಗಳಲ್ಲಿಯೂ ಮುನ್ನಡೆಸಬೇಕು. 1998 ರಲ್ಲಿ ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ‌ ಅಂದಿನ ಜಿಲ್ಲಾ ಉಸ್ತುವಾರಿ ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ಹಂಪಿ ಉತ್ಸವ ಆರಂಭಿಸಲಾಯಿತು. ಜಿಲ್ಲೆ ವಿಭಜನೆಯ ನಂತರ ಎಸ್.ಆರ್. ಬೊಮ್ಮಾಯಿ ಮಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇರುವ ಸಂದರ್ಭದಲ್ಲಿ ಬಳ್ಳಾರಿ ಉತ್ಸವವನ್ನು ಪ್ರಾರಂಭಿಸಲಾಗಿದೆ ಎಂದರು.

ನಾಡಿನ ಹಂಪಿ ಕದಂಬ, ಲಕ್ಕುಂಡಿ, ಚಾಲುಕ್ಯ, ಧಾರವಾಡ ಉತ್ಸವ ಸಾಲಿಗೆ ಬಳ್ಳಾರಿ ಉತ್ಸವ ಸೇರಿದೆ. ಬಳ್ಳಾರಿ ನಗರವನ್ನು ಉಕ್ಕಿನ ನಗರ‌ ಎಂದು ಕರೆಯುತ್ತೇವೆ. ದೇವರು ಬಳ್ಳಾರಿ ಜಿಲ್ಲೆಯನ್ನು ಉಕ್ಕಿನ‌ ಜಿಲ್ಲೆಯಾಗಿ ಮಾಡಿದ್ದಾನೆ. ಹನುಮಪ್ಪ ನಾಯಕ ಉಕ್ಕಿನಂಥ ಕೋಟೆ ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ ದೇಶದ ಭೂಪಟದಲ್ಲಿ ಬಳ್ಳಾರಿ ಜಿಲ್ಲೆಯನ್ನು ಸುವರ್ಣ ಅಕ್ಷರದಲ್ಲಿ ಗುರುತಿಸಲಾಗುತ್ತಿದೆ. ಜಿಲ್ಲೆಯ ಕಲೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಬಳ್ಳಾರಿ ಉತ್ಸವ ಆಯೋಜಿಸಲಾಗಿದೆ. ಕಳೆದ 16ನೇ ತಾರಿಖಿನಿಂದ ವಿವಿಧ ಕಾರ್ಯಕ್ರಮಗಳು ಆರಂಭವಾಗಿವೆ.

ಶತಮಾನದ ಇತಿಹಾಸ ಇರುವ ಬಳ್ಳಾರಿಯ ಕೃಷಿ ಕಾಲೇಜಿಗೆ ರೂ.25. ಕೋಟಿ ಮಂಜೂರು ಮಾಡಲಾಗಿದೆ. ಜೀನ್ಸ್ ಉತ್ಪಾದನಾ ಉದ್ಯಮಕ್ಕೆ 50 ಎಕರೆ ಜಮೀನು ನೀಡಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಿಸಲು ಸರ್ಕಾರ ರೂ100 ಕೋಟಿ ಬಿಡುಗಡೆ ಮಾಡಲಾಗಿದೆ. 2008 ರಲ್ಲಿ ಪ್ರಾರಂಭಿಸಿದ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 40 ಕೋಟಿ ನೀಡಿಲಾಗಿದೆ. ಶೀಘ್ರದಲ್ಲೇ ಬಳ್ಳಾರಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಾಗುವುದು. ನಗರದಲ್ಲಿ 20 ಎಕರೆ ವಿಸ್ತೀರ್ಣ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. 23 ಎಕರೆ ವೆಚ್ಚದಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಹಾಗೂ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ಒಲಂಪಿಕ್ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಅನುಕೂಲವಾಗುವಂತೆ ಸಿಂಥಟಿಕ್ ಟ್ರಾಕ್ ನಿರ್ಮಿಸಲಾಗಿದೆ. ನಗರದಲ್ಲಿ ಹಾಕಿ ಕ್ರೀಡಾಂಗಣ ನಿರ್ಮಿಸಲಾಗಿದೆ.

*ಶ್ರೀರಾಮುಲು ಎಂಬ ಬಾನ ಎತ್ತರದ ಗಾಳಿಪಟದ ಸೂತ್ರ ಬಳ್ಳಾರಿ ಜನತೆ ಕೈಯಲ್ಲಿ*

ಬಳ್ಳಾರಿ ಜನರು ನನ್ನನ್ನು ಉತ್ತಂಗಕ್ಕೆ ಏರಿಸಿದ್ದಾರೆ. ಗಾಳಿಪಟದ ರೀತಿಯಲ್ಲಿ ಬಾನ ಎತ್ತರದ ಹಾರಾಡುತ್ತಿರುವ ನನ್ನ ಸೂತ್ರ ಬಳ್ಳಾರಿ ಜನತೆ ಕೈಯಲ್ಲಿದೆ. ಬಳ್ಳಾರಿ ರಾಜಕೀಯವಾಗಿ ನನಗೆ ಪುನರ್ಜನ್ಮ ನೀಡಿದ್ದಿರಿ. ನಾಯಕ ಜನಾಂಗದಲ್ಲಿ ಹುಟ್ಟಿದ ಶ್ರೀರಾಮುಲು ಎಲ್ಲಾ ಜನಾಂಗದ ಪ್ರೀತಿ ಅಭಿಮಾನ ಗಳಿಸಿದ್ದೇನೆ.‌ ಬಳ್ಳಾರಿ ಜಿಲ್ಲೆ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಸಚಿವ ಶ್ರೀರಾಮುಲು ಭಾವುಕವಾಗಿ ನುಡಿದರು‌.

ನಟ ರಾಘವೇಂದ್ರ ರಾಜ ಕುಮಾರ ಅವರು ಅತಿಥಿಗಳಾಗಿ ಪಾಲ್ಗೊಂಡ ಮಾತನಾಡಿ, ಅಭಿಮಾನಿ ದೇವರುಗಳಿಗೆ ನಮಸ್ಕಾರ ತಿಳಿಸಿದರು. ಈ ಬಳ್ಳಾರಿ ಉತ್ಸವ ಒಂದು ರೀತಿಯಲ್ಲಿ ಬಳ್ಳಾರಿಯ ದಸರಾ ಆಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ಸ್ಟಾರ್ ಆಗಿ ನೋಡುತ್ತಿದ್ದರು. ಆದರೆ ಈಗ ಅವರನ್ನು ಪುತ್ತಳಿಯ ರೂಪದಲ್ಲಿ ನೋಡುವಂತಾಗಿದೆ. ಪುನೀತ್ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನ್ ಅಜರಾಮರ ಎನ್ನುತ್ತಾ, ಪುನೀತ ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಎಂಬ ಹಾಡು ಹೇಳಿ ತಮ್ಮ ಮಾತಿಗೆ ವಿರಾಮ ನೀಡಿದರು.

ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿವುಳ್ಳ ಪ್ರವಾಸೋದ್ಯಮ ಇಲಾಖೆ ಕೈಪಿಡಿ ಬಿಡುಗಡೆ ಮಾಡಲಾಯಿತು.

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಕರ್ನಾಟಕ ರಾಜ್ಯ ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷ ಗೌಡ,ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಸರ್ವಶೆಟ್ಟಿ ಮಾರುತಿ ಪ್ರಸಾದ್, ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್, ಚಲನಚಿತ್ರ ನಿರ್ಮಾಪಕಿ ಅಶ್ವಿನ್ ಪುನೀತ್ ರಾಜಕುಮಾರ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಪಾಲಿಕೆ ಆಯುಕ್ತ ಜಿ.ರುದ್ರೇಶ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಹೇಮಂತ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Verified by MonsterInsights